ಆಟಿ ತಿಂಗಳಿನ ಆಚರಣೆಗಳು:ಆಟಿ ತಿಂಗಳು ಎಂದರೆ ಸುಮಾರು ಜುಲೈ ತಿಂಗಳಿನಲ್ಲಿ ಬರುವ ಕರ್ಕಾಟಕ ಸಂಕ್ರಮಣದ ಮರುದಿನದಂದು ಶುರುವಾಗಿ ಮತ್ತು ಮುಂದಿನ ಸಿಂಹ ಸಂಕ್ರಮಣದ ವರೆಗೆ. ತುಳುನಾಡಿನ ೧೨ ತಿಂಗಳುಗಳ ಪೈಕಿ ನಾಲ್ಕನೇ ತಿಂಗಳು. ರಾಜ್ಯದ ಬೇರೆಡೆಯಲ್ಲಿ ಆಷಾಡಮಾಸದ ಆಚರಣೆಯಂತೆ ಈ ತಿಂಗಳಿನಲ್ಲಿ ಯಾವುದೇ ಸಮಾರಂಭಗಳು, ಪೂಜೆ-ಪುನಸ್ಕಾರಗಳು ನಡೆಯುವುದಿಲ್ಲ. ಹಿಂದೆಲ್ಲಾ ಆಟಿ ತಿಂಗಳಿನಲ್ಲಿ ಮಳೆ ಎಷ್ಟು ಮಳೆಯಾಗಿತ್ತು ಎಂದರೆ ಮೋಡಗಳಿಂದ ಪೂರ್ತಿ ಕತ್ತಲಾಗುತ್ತಿತ್ತು. ಮಳೆಗಾಲದಲ್ಲಿ ಹೆಚ್ಚು ಮಳೆಯಾಗುತ್ತಿದ್ದ ತಿಂಗಳು. ಈಗಿನ ಹಾಗೆ ಮಳೆ ಒಮ್ಮೆಲೇ ಬರುತ್ತಿರಲಿಲ್ಲ. ದಿನವಿಡೀ ಮಳೆ ಬರುತ್ತಿತ್ತು. ಸೂರ್ಯನ ಬೆಳಕೂ ಹೆಚ್ಚು ಕಾಲ ಸರಿಯಾಗಿ ಇರುತ್ತಿರಲಿಲ್ಲ. ಹಾಗಾಗಿ ರೋಗಗಳು ಹೆಚುತ್ತಿದ್ದವು. ಅದಕ್ಕಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿವಿಧ ಗಿಡ ಮೂಲಿಕೆಗಳನ್ನು, ಕಷಾಯಗಳನ್ನು ಕುಡಿಯುತ್ತಿದ್ದರು. == ಆಟಿ ತಿಂಗಳಿನ ವಿವಿಧ ಆಚರಣೆಗಳು == === ಆಟಿ ಕಳಂಜ ಕುಣಿತ === ಆಟಿ ಕಳೆಂಜ ಆಟಿ ತಿಂಗಳಿನಲ್ಲಿ ಮನೆಮನೆಗೆ ಬರುತ್ತಿದ್ದರು. ಇದನ್ನು ನಲಿಕೆ ಜನರ ಪಂಗಡ ನಡೆಸಿಕೊಂಡು ಬಂದಿದ್ದಾರೆ. ಆಟಿ ಕಳಂಜನ ವೇಷದಲ್ಲಿ ಸೊಂಟಕ್ಕೆ ತೆಂಗಿನ ತಿರಿ, ಕಾಲಿಗೆ ಗಗ್ಗರ, ಕೈಗೆ-ಮೈಗೆ ಬಣ್ಣ, ಗಡ್ಡ ಮತ್ತು ಮೀಸೆ, ಅಡಿಕೆ ಹಾಳೆಯಿಂದ ಮಾಡಿದ ಮತ್ತು ಕಿಸಗಾರ ಹೂವಿನಿಂದ ಸಿಂಗರಿಸಿದ ಟೊಪ್ಪಿ ಇರುತ್ತದೆ. ಕೈಯಲ್ಲಿ ತಾಳೆಗರಿಯ ಛತ್ರಿ ಇರುತ್ತದೆ. ಜೊತೆಗೆ ಹಿಮ್ಮೇಳದಲ್ಲಿ ಇರುವವರು "ತೆಂಬರೆ"ಯೊಂದಿಗೆ ಪಾಡ್ದನ ಹೇಳಿಕೊಂಡು ಮನೆಮನೆಗೆ ಬರುತ್ತಾರೆ. ಇವರಿಗೆ ಧವಸ ಧಾನ್ಯ, ತೆಂಗಿನಕಾಯಿ ನೀಡುತ್ತಾರೆ. ತುಳು ಪಾಡ್ದನಗಳ ಪ್ರಕಾರ ಆಟಿ ಕಳೆಂಜ ಬಂದು ರೋಗ ರುಜುನೆಗಳನ್ನು ಕಡಿಮೆಮಾಡುತ್ತಾನೆ ಎಂದು. ಈಗ ಈ ಆಚರೆಯನ್ನು ನಗರ ಪ್ರದೇಶದಲ್ಲಿ ಕಾಣಲು ಸಾಧ್ಯವಿಲ್ಲ. ಆದರೆ ಹಳ್ಳಿಗಳಲ್ಲಿ ಈ ಆಚರಣೆ ಇವೆ. === ಆಟಿ ಕುಲ್ಲುನೆ === ಆಟಿ ತಿಂಗಳಿನಲ್ಲಿ ಮದುವೆಯಾದ ದಂಪತಿ ತಮ್ಮ ಹಿರಿಯರಲ್ಲಿಗೆ ಹೋಗಿ ಅವರ ಆಶೀರ್ವಾದ ತೆಗೆದುಕೊಂಡು ಬರುವ ಈ ಆಚರಣೆಗೆ ಆಟಿ ಕುಲ್ಲುನೆ ಎನ್ನುತ್ತಾರೆ. ಇದನ್ನು ಈಗ ಹೆಚ್ಚಿನವರು ಮಾಡುತ್ತಿಲ್ಲ. ಈ ಆಚರಣೆ ತುಂಬಾ ವಿರಳವಾಗಿದೆ ಎಂದು ಮನೆಯ ತೋಟದ ಕೆಲಸಕ್ಕೆ ಬಂದ ರಾಮಣ್ಣನ ಬಳಿ ತಿಳಿದುಕೊಂಡೆ. ಆಟಿದ ಅಗೆಲ್ ಕುಲ್ಲುನೆ: ಆಟಿ ತಿಂಗಳಿನಲ್ಲಿ ತುಳು ಜನಾಂಗದಲ್ಲಿ ಸತ್ತವರಿಗೆ ಬಡಿಸುವ ಕಾರ್ಯಕ್ರಮವನ್ನೇ ಅಗೆಲ್ ಕುಲ್ಲುನೆ ಎನ್ನುತ್ತಾರಂತೆ. ಇದಕ್ಕೆ ಕೋಳಿ ಪದಾರ್ಥ, ಚೇಟ್ಲ ಪದಾರ್ಥ ಮಾಡುತ್ತಾರೆ. ಇದು ರಾತ್ರಿ ಕುಟುಂಬದ ಸದಸ್ಯರು ನಡೆಸುವ ಆಚರಣೆ. === ಆಟಿ ಅಮಾವಾಸ್ಯೆ === ಆಟಿ ತಿಂಗಳಿನಲ್ಲಿ ಬರುವ ಅಮಾವಾಸ್ಯೆಯಂದು ಹಾಲೆ (ಸಪ್ತಪರ್ಣಿ) ಮರದ ತೊಗಟೆಯನ್ನು ಕಡೆದು ಹಾಲು ಕುಡಿಯುತ್ತಾರೆ. ಅಥವಾ ಸಪ್ತಪರ್ಣಿ ಮರದ ತೊಗಟೆಯ ಕಷಾಯ ಮಾಡಿ ಕುಡಿಯುತ್ತಾರೆ. ಇದರಲ್ಲಿ ಒಂದು ವಿಶೇಷತೆ ಎಂದರೆ ತೊಗಟೆಯನ್ನು ಸೂರ್ಯನ ಬೆಳಕು ಹರಿಯುವ ಮೊದಲೇ ಕಲ್ಲಿನಿಂದ ಜಜ್ಜಿ ತೆಗೆಯುತ್ತಾರೆ. ಯಾರು ಕತ್ತಿಯನ್ನು ಬಳಸಿ ತೊಗಟೆಯನ್ನು ತುಂಡರಿಸುವುದಿಲ್ಲ. ಇದಕ್ಕೆ ಕಾರಣ ಕತ್ತಿ ತಾಗಿದರೆ ವಿಷ ಎಂದು ಹೇಳುತ್ತಾರೆ. == ವಿವಿಧ ಆಹಾರಗಳು == ಚೇವು () ಎಲೆಯಿಂದ ಮಾಡುವ ಒಂದು ತಿಂಡಿ. ಇದಕ್ಕೆ ಮೆಣಸು, ಉದ್ದಿನಬೇಳೆ ಮುಂತಾದ ಆಹಾರ ಪದಾರ್ಥಗಳನ್ನು ಅಕ್ಕಿಯೊಂದಿಗೆ ಕಡೆದು ವಿವಿಧ ರೀತಿಯಲ್ಲಿ ಎಲೆಗೆ ಬೆರೆಸಿ ಹಬೆಯಲ್ಲಿ ಬೇಯಿಸಿ ತಿನ್ನುತ್ತಾರೆ. ತಜಂಕ್ ಅಥವಾ ತಗತೆ ಸೊಪ್ಪಿನ ಸಾರು, ಪಲ್ಯ , ಬಗೆಬಗೆಯ ದೋಸೆ ಹಲವಾರು ತಿನಿಸುಗಳನ್ನು ತಯಾರಿಸುತ್ತಾರೆ. == ಉಲ್ಲೇಖಗಳು ==